ರಣಜಿತ್ ಸಿಂಹ
1780-1839. ಪಂಜಾಬಿನ ಸಿಖ್ ರಾಜ್ಯ ಸ್ಥಾಪಕ. 1780 ನವೆಂಬರ್ 13ರಂದು ಬದ್ರುಖಾನ್ ಎಂಬಲ್ಲಿ ಜನಿಸಿದ. (ಇನ್ನೊಂದು ಹೇಳಿಕೆಯಂತೆ ಗುಜ್ರನ್‍ವಾಲಾದಲ್ಲಿ 1780 ನವೆಂಬರ್ 2ರಂದು ಜನಿಸಿದನೆಂದೂ ತಿಳಿದುಬಂದಿದೆ). ಈತ ಸುಕೇರ್ ಚಕಿಯಾ ಪಂಥದ ಮಹಾಸಿಂಹನ ಮಗ. ತಂದೆಯ ಮರಣದಿಂದಾಗಿ 12ನೆಯ ವರ್ಷದಲ್ಲಿ 1792ರಲ್ಲಿ ಪಟ್ಟವೇರಿದ. 1793-98ರ ಅವಧಿಯಲ್ಲಿ ಆಫ್‍ಘನ್ನರ ದೊರೆ ಜಮಾನ್ ಷಹ ಪಂಜಾಬಿನ ಮೇಲೆ ಆಗಾಗ ಧಾಳಿ ಮಾಡುತ್ತಿದ್ದ. ರಣಜಿತ್‍ಸಿಂಹ ತನ್ನ 18ನೆಯ ವಯಸ್ಸಿನಲ್ಲಿ ಆಫ್‍ಘನ್ನರಿಗೆ ಎದುರಾಗಿ ಲಾಹೋರನ್ನು 1799 ಜುಲೈನಲ್ಲಿ ವಶಪಡಿಸಿಕೊಂಡ. ಜಮಾನ್ ಷಹ ರಣಜಿತ್‍ಸಿಂಹನ ಬಲವನ್ನರಿತು ಅವನನ್ನು ಲಾಹೋರಿನ ಆಡಳಿತಾಧಿಕಾರಿ ಎಂದು ಮಾನ್ಯ ಮಾಡಿ ರಾಜ ಎಂಬ ಬಿರುದು ನೀಡಿದ. ಶಕ್ತಿಶಾಲಿ ಭಾಂಗೀಸ್ ಸಿಖ್‍ರನ್ನು 1801ರಲ್ಲಿ ಸೋಲಿಸಿದ. 1805ರಲ್ಲಿ ಅಮೃತಸರ ಕೋಟೆಯನ್ನು ಅದರಲ್ಲಿನ ಪ್ರಸಿದ್ಧ ಝಮ ಝಮ ಬಂದೂಕನ್ನೂ ವಶಪಡಿಸಿಕೊಂಡ. 1806 ಜನವರಿ 1ರಂದು ಹೋಳ್ಕರ್‍ನನ್ನು ತನ್ನ ರಾಜ್ಯದಿಂದ ಹೊರಗಟ್ಟಲು ಒಪ್ಪಿ ಇಂಗ್ಲಿಷರೊಡನೆ ಲಾಹೋರ್ ಒಪ್ಪಂದವನ್ನು ಮಾಡಿಕೊಂಡು ಸ್ವಯಂ ಪಂಜಾಬಿನ ಸರ್ವಾಧಿಕಾರಿಯಾದ. ಪರಸ್ಪರ ಬಡಿದಾಡುತ್ತಿದ್ದ ಸಿಖ್ಖರ ರಾಜ್ಯಗಳನ್ನು ಅದ್ಭುತ ರೀತಿಯಲ್ಲಿ ಒಂದುಗೂಡಿ ಅಡಕವಾದ ರಾಷ್ಟ್ರೀಯ ನಿರಂಕುಶಾಧಿಕಾರವನ್ನು ಸ್ಥಾಪಿಸಿದ. ಲೂಧಿಯಾನವನ್ನು 1807ರಲ್ಲಿ ವಶಪಡಿಸಿಕೊಂಡಿದ್ದರಿಂದ ಬ್ರಿಟಿಷ್‍ರೊಡನೆ ತಿಕ್ಕಾಟ ಆರಂಭವಾಯಿತು. ಈತ ಪೆಷಾವರದಿಂದ ಸಟ್ಲೆಜ್‍ವರೆಗೆ ರಾಜ್ಯವನ್ನು ವಿಸ್ತರಿಸಿದಾಗ, ಸಟ್ಲೆಜ್ ವರೆಗಿನ ರಾಜ್ಯ ತಮ್ಮದೆಂದು ಬ್ರಿಟಿಷರು ವಾದಿಸಿದರು. ಈ ಸಮಸ್ಯೆಯನ್ನು 1808ರಲ್ಲಿ ಚಾಲ್ರ್ಸ್ ಮೆಟ್‍ಕಾಫ್‍ನ ಸಂಧಾನದ ಮೂಲಕ ಇತ್ಯರ್ಥಪಡಿಸಿ ಇಂಗ್ಲಿಷರು ಈತನೊಡನೆ 1869ರಲ್ಲಿ ಏಪ್ರಿಲ್ 25ರಂದು ಅಮೃತಸರ್ ಒಪ್ಪಂದವನ್ನು ಮಾಡಿಕೊಂಡರು. ಪಾಶ್ಚಾತ್ಯ ತರಬೇತಿ ಕಪಡೆದ ಪ್ರಸಿದ್ಧ ಸಿಖ್ ಸೈನ್ಯವನ್ನು ಈತ ಕಟ್ಟಿದ. ಅದರಲ್ಲಿ ಫಿರಿಂಗಿದಳ ಮತ್ತು ದೇಶಭ್ರಷ್ಟರಾದ ಅನೇಕ ಯುರೋಪಿಯನ್ ಅಧಿಕಾರಿಗಳಿದ್ದರು. ಫ್ರೆಂಚ್ ಮತ್ತು ಇಟಾಲಿಯನ್ನ ಅಧಿಕಾರಿಗಳೂ ಈತನ ಸೈನ್ಯದಲ್ಲಿದ್ದಂರಂತೆ. ಇದೆಲ್ಲವನ್ನೂ ಉಪಯೋಗಿಸಿಕೊಂಡು ರಣಜಿತ್‍ಸಿಂಹ 1811ರಲ್ಲಿ ಕಾಂಗ್ರವನ್ನೂ 1813ರಲ್ಲಿ ಆಟ್ಟೋಕ್ ನಗರವನ್ನೂ ಆಕ್ರಮಿಸಿಕೊಂಡ. 1814ರಲ್ಲಿ ಆಫ್‍ಘನ್ನಿನಿಂದ ಓದಿ ಬಂದಿದ್ದ ದೊರೆ ಷಹಶೂಜನಿಗೆ ಆಶ್ರಯ ನೀಡಿ ಅವನಿಂದ ಪ್ರಸಿದ್ಧ ಕೊಹಿನೂರು ವಜ್ರವನ್ನು ಪಡೆದುಕೊಂಡ. 1818ರಲ್ಲಿ ಮುಲ್ತಾನನ್ನೂ 1819ರಲ್ಲಿ ಕಾಶ್ಮೀರವನ್ನೂ ವಶಪಡಿಸಿಕೊಂಡ. 1823ರಲ್ಲಿ ಪೆಷಾವರ್ ಕೋಟೆಯನ್ನು ವಶಪಡಿಸಿಕೊಂಡ. 1820ರ ವೇಳೆಗೆ ಸಟ್ಲೆಜ್‍ನಿಂದ ಸಿಂಧು ವರೆಗಿನ ಸಮಗ್ರ ಪಂಜಾಬಿನಲ್ಲಿ ತನ್ನ ಅಧಿಕಾರವನ್ನು ಸ್ಥಾಪಿಸಿ ಪಂಜಾಬಿನ ಸಿಂಹ ಎಂಬ ಖ್ಯಾತಿ ಗಳಿಸಿದ. 1837ರಲ್ಲಿ ಪೆಷಾವರದ ಮೇಲಿನ ಆಫ್ಘನ್ ಆಕ್ರಮಣವನ್ನು ಹಿಮ್ಮೆಟ್ಟಿಸಿದ. 1838ರಲ್ಲಿ ಷಹಶೂಜನನನ್ನು ಆಫ್ಘನ್ ಸಿಂಹಾಸನದ ಮೇಲೆ ಪುನರ್‍ಸ್ಥಾಪಿಸಲು ಲಾರ್ಡ್ ಆಕ್ಲೆಂಡ್ ಮತ್ತು ಷಹಶೂಜ ಅವರೊಂದಿಗೆ ತ್ರಿಪಕ್ಷೀಯ ಒಡಂಬಡಿಕೆ ಮಾಡಿಕೊಂಡ.

ರಣಜಿತ್‍ಸಿಂಹ ಎಷ್ಟು ಶೂರನೋ ಅಷ್ಟೇ ಉತ್ತಮ ಮುತ್ಸದ್ದಿಯೂ ಆಗಿದ್ದ. ಹಿಂದೂ, ಮುಸ್ಲಿಂ ಹಾಗೂ ಯೂರೋಪಿಯನರನ್ನು ಧಾರಾಳವಾಗಿ ನೇಮಿಸಿಕೊಂಡರೂ ಸಿಖ್ಹರಿಗೆ ವಿಶೇಷ ಪ್ರಾಧಾನ್ಯ ನೀಡುತ್ತಿದ್ದ. ಈತ ನೀರಾವರಿ ಹಾಗೂ ವಾಣಿಜ್ಯ ಬೆಳೆವಣಿಗೆಗೆ ಹೆಚ್ಚು ಗಮನ ನೀಡದೆ ಸೈನ್ಯದ ಅಗತ್ಯಗಳ ಪೂರೈಕೆಗಾಗಿ ರಾಜ್ಯದ ಹೆಚ್ಚಿನ ಆದಾಯವನ್ನು ವಿನಿಯೋಗಿಸಿದನೆನ್ನಲಾಗಿದೆ. 
ರಣಜಿತ್‍ಸಿಂಹ 1939 ಜೂನ್ 21ರಂದು ಲಾಹೋರಿನಲ್ಲಿ ನಿಧನನಾದ ಅನಂತರ ಈತನ ಪುತ್ರ ದಿಲೀಪ್‍ಸಿಂಗ್ ರಾಜನಾದ. ಈತ ಪಂಜಾಬಿನ ಕೊನೆಯ ರಾಜ. ಆರೇ ವರ್ಷಗಳ ಅವಧಿಯೊಳಗೆ ಆಂತರಿಕ ತಿಕ್ಕಾಟದಿಂದ ರಾಜ್ಯ ಕುಸಿದುಬಿತ್ತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ